ಕೆಳಾಕ್ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅಂತಾನ್ರಿ ಕೊಮಾರರಾಮ!

ಚಾಮುಂಡೇಸ್ವರಿ ಕ್ಷೇತ್ರದ ಚುನಾವಣೆನಾಗೆ ಮಾತಾಯಿ ಚಾಮುಂಡಿ, ಅಪ್ಪ ಮಹಿಷಾಸುರ, ಮಗ ರಕ್ತಬೀಜಾಸುರರ ಅಹಂಕಾರವನ್ನು ಮೂಲಾಜಿಲ್ದಂಗೆ ಮರ್ಧನಮಾಡಿ ಪುಣ್ಯ ಕಟ್ಟಿಕೊಂಡವಳೆ ಅಂಬೋದು ಶ್ಯಾನೆ ಹ್ಯಾಪಿ ಮ್ಯಾಟ್ರೇ ಕಣ್ರಿ. ಯಲಕ್ಷನ್ ಅಂಬೋದು ಒನ್ ಡೇ ಮ್ಯಾಚಿನಂಗೆ ಒಂದೊಂದು ಮತಯಂತ್ರ ತೆಗೆದಾಗ್ಲೂ ರನ್ಗಳ (ಮತಗಳ) ಏರಿಳಿತ ಕಂಡು ಭಾರತದ ಟೀಮು ಅಚಾನಕ್ ಅಚ್ಚರಿಯ ವಿಜಯ ಗಳಿಸೋ ಹಂಗೆ ಕಾಂಗ್ರೆಸ್ ವಿನ್ ಮ್ಯಾನ್ ಆಫ್ ದಿ ಮ್ಯಾಚ್ ಸಿದ್ರಾಮು ಆಗಿದ್ದು ಹರಸಾಹಸವೇ ಬಿಡ್ರಲಾ. ಮ್ಯಾನ್ ಆಫ್ ದಿ ಚಾಮುಂಡಿ ಸೀರಿಸ್ ಯಾರು ಹೇಳ್ರಿ? ಕಗೆನಾ? ಅಂಬ್ರೀಸಾ? ಡೈಮಂಡ್ ಪೀಟ್ರಾ? ನೊನೊನೊನೊ… ಜೆಡಿ‌ಎಸ್ ಸೋಲಿಗೆ ಮೇನ್ ಕಾರಣನಾದ ಆಸಾಮಿ ರಾಜಸೇಕರಮೂತ್ರಿ. ಆವಯ್ಯ ಸಿವಬಸ್ಯನಂಥ ಪ್ಯಾದೆ ಕ್ಯಾಂಡಿಡೇಟ್ ಸೆಲೆಕ್ಟ್ ಮಾಡಿದ್ಕೆ ಸಿದ್ರಾಮುಗೆ ರಾಜಕೀಯವಾಗಿ ಮಂದೆಲ್ಲಾ ಸಿಗಬಹುದಾಗಿದ್ದ ಡೆಡ್ಲಿ ಆರಾಮ ಮಿಸ್ ಆತು. ಸಿದ್ರಾಮು ವಿನ್ ಆತು. ಗೋಡ್ರಾಣೆಗೂ ಮ್ಯಾನ್ ಆಥ್ ದಿ ಸೀರೀಸ್ ಓಲ್ಡ್ ರಾಜಸೇಕರ ಮೂತ್ರಿನೆಯಾ. ಹಿಂದೆ ತಾಗಿದ್ದ ಬಿಜೆಪಿ, ಈಗಿರೋ ಜೆಡಿ‌ಎಸ್ ಎಂಬ ಪಕ್ಷದೋಗೂ ಚಳ್ಳೆಹಣ್ಣು ತಿನ್ನಿಸಿದ ಈವಯ್ಯ ಬೆಣ್ಣೆ ತಿಂದ ಬೆಕ್ಕಿನಂಗೆ ಗಪ್ ಕುಂತಾನ. ಯಲಕ್ಷನ್‌ನಾಗೆ ಗೆದ್ದೋರು ಸೋತು ಸುಣ್ಣವಾದರೂ ಮಾಡ್ತಿರೋ ಕಾಮೆಂಟ್ ಮಾಜನಗಳಿಗಂತೂ ಅಗ್ದಿ ಎಂಟರ್‌ಟ್ರೇನ್‌ಮೆಂಟ್ ಕೊಡ್ಲಿಕ್ಕತ್ತದ ನೋಡ್ರಿ. ಒಂದಷ್ಟು ಸ್ಯಾಂಪಲ್ ಕೊಟ್ನೀನಿ ಪರಾಂಬರಿಸಬೇಕ್ರಿ.

ಸಿ‌ಎಂ ಕೊಮಾಸಾಮಿ : ಎಲ್ಲಾ ಸರ್ತಿನೆಡ್ದ ಚುನಾವಣೆಗಿಂತ ಈಸಲ ನಮ್ಗೇ ಮಸ್ತು ಓಟು ಬಿದ್ದಿವೆ. ಸಿದ್ದು ಕಡಿಮೆ ಓಟ್ ತಕ್ಕಂಡು ಸುಸ್ತೂಬಿದ್ದವ್ನೆ. ನಾವು ಸೋತು ಗೆದ್ದೀವಿ. ಸಿದ್ದುನಾ ನಿಜವಾಗ್ಲೂ ಗೆಲ್ಲಿಸಿದ್ದು ಪೀಟರ್ ಎಂಬ ಪೀಡೆ. ಆತನಿಗೆ ನನ್ನ ಹಾರ್ಟಿ ಕಂಗ್ರಾಟ್ಸ್ ಸೋತರು ನಾನು ಡೋಂಟ್‌ಕೇರ್. ಚಾಮುಂಡಿ ಕ್ಷೇತ್ರಂವಾ ಇನ್ನು ಮುಂದೆ ಐ ವಿಲ್ ಟೇಕ್ ಕೇರ್. ಮುಂದೂ ಅಲ್ಲೇ ಮುದ್ದೆ ಉಂಡೇ ಉಣ್ಣುವೆ ಯಾದಾರ ಮನೆಯಾಗೆ ನಿದ್ದೆ ಹೊಡ್ದೆ ಹೊಡೆಯುವೆ ಸ್ತ್ರೀಶಕ್ತಿ ಯುವ ಶಕ್ತಿಗಳ ಮನ ಸೆಳೆದು ಗೆದ್ದೇ ಗೆಲ್ಲುವೆ…. ಬಿಲೀವ್ ಮಿ.

ಕೂಗುಮಾರಿ ಯಡೂರಿ : ಇಲಿ ನೋಡ್ರಿ ನಾವಂತೂ ಇದ್ರಾಗೆ ನಮ್ದೇನು ಗಂಟು ಕಳ್ಕೊಂಡಿಲ್ಲ. ನಾವು ಕ್ಯಾಂಡಿಡೇಟ್ನೂ ಹಾಕಿರಲಿಲ್ಲ. ಗೆದ್ದಿದ್ದರೆ ಅಪ್ಪ ಮಕ್ಕಳು ಅಂಕೆಯಿಲ್ಲದ ಕುದುರೆ ಅಗುಳು ದಾಟ್ತು ಅನ್ನೋಂಗಾಗಿ ನಮ್ಮ ಮೇಲೆ ಸವಾರಿ ಮಾಡೋರು. ಇದರಿಂದ ನಮಗೆ ಒಳ್ಗೆ ಸಂತೋಷವಾದ್ರೂ ತೋರಿಸಿಕೊಳ್ಳಂಗಿಲ್ರಿ. ಕೊಮಾರಂದು ೧೦ ತಿಂಗಳು ಮುಗಿಯೋದ್ನೆ ಕಾಯ್ತಿದೀನಿ. ಆಮೇಲೆ ನಾನೇ ಸಿ‌ಎಂ ಅಧಿಕಾರಕ್ಕಾಗಿ ಎಂತ ಅಡ್ಜೆಸ್ಟ್‌ಮೆಂಟ್ಗೂ ಹೊಡಿತೀನಿ ಸಲಾಂ. ಅಧಿಕಾರ ಕಳ್ಕೊಂಡ ರಾಜಕಾರಣಿ ಹೆಣಕ್ಕಿಂತ ಅತ್ತತ್ತ ಹೆಣದ ದರ್ಶನ ಪಡಿತಾರೆ. ಜೆಡಿ‌ಎಸ್ಗೆ ಭದ್ರ ಪೆವಿಕಾಲು.

ಹಲ್ಲುಗಿಸಗ ಬಿಜೆಪಿ ಅಧ್ಯಕ್ಷ : ಅಲ್ಪಮತದಿಂದ ಗೆಲ್ಲೋದು ಸೋಲು ಮಾರಾಯ್ರ. ಸೋ ಸಿದ್ದು ರಾಜಿನಾಮೆ ಕೊಡ್ಲಿಕ್ಕೆ ಅಡ್ಡಿಯಿಲ್ಲ. ಈಗ ನನ್ನ ಬುಡಕ್ಕೆ ನಮ್ಮೋರೆ ಬಾಂಬ್ ಇಟ್ಟರೋದಿಂದ್ರ ಹೆಚ್ಚು ಪಿರಿಪಿರಿಮಾಡಲು ಟೇಂ ಇಲ್ಲ. ನಾನೀಗ ಡೆಲ್ಲಿ ವಿಮಾನ ಏರ್ಲಿಕ್ಕುಂಟು ಮಾರಾಯ್ರ… ಬಾಯ್.

ಗೆದ್ದ ಸಿದ್ರಾಮು : ಒಂದು ಮತದಿಂದ ಗೆದ್ದರೂ ಗೆಲುವೆ. ಹಣ ಹೆಂಡ ಜಾತಿ ಪವರ್‌ಪುಲ್ ಅಗಿದ್ದು ದೊಡ್ಡ ದುರಂತ. ಸೋತರೂ ಗೆದ್ದೀನಿ ಅಂತಾನಲ್ಲ ಈ ಕೊಮಾರ, ಕೆಳಗೆ ಬಿದ್ದರೂ ನನ್ನ ಮೀಸೆ ಮಣ್ಣಾಗಲಿಲ್ಲ ಅನ್ನಂಗೆ ಕೊಮಾರ ಫೋಜ್ ಕೊಡ್ತಾ ಅವ್ನೆ.

ಮಲ್ಲಿಕಾರ್ಜುನ ಕರ್ಗೆ : ನಾನೇ ಅಭ್ಯರ್ಥಿ ಅಂತ ಹೇಳಿದ್ನಲ್ಲ ಕೊಮಾರ ಈಗ ಗಮಾರ ಆಗವ್ನೆ. ಈ ಕಾರಣವಾಗಿ ರಾಜಿನಾಮೆ ಕೂಡೋದು ಹೆಚ್ಚು ಸೂಕ್ತ.

ಗೋಡ್ರುದತ್ತುಪುತ್ರ : ಜೆಡಿ‌ಎಸ್ ಸೋಲಿಸಿದ್ದು ಸಿದ್ರಾಮು ಅಲ್ಲ. ತಾಂತ್ರಿಕ ಕಾರಣಗಳಿಗಾಗಿ ನಾವು ಸೋತಿದ್ದೇವೆ. ಸೀರಿಯಲ್ ನಂಬನ ಉಲ್ಟ ಅರ್ಥ ಮಾಡಿಕೊಂಡ ಹಳ್ಳಿಮಂದಿ ಎಲ್ಲಾ ಸಿವಬಸಪ್ಪನಿಗೆ ಒತ್ತಾತ್ತಾ ಅದೀವಿ ಅಂತ ತಿಳ್ಕೊಂಡು ಕೊನೆಯಿಂದ ಮೊದಲ ಸಂಕ್ಯೆಯಾದ ೧೪ ರ ಬಟನ್ ಒತ್ತವರೆ. ನಯಾಪೈಸೆಯಾ ಖರ್ಚು ಮಾಡ್ಡೆ ಸಿಂಗಲ್ ಪಾಂಪ್ಲೆಟ್ ಪ್ರಿಂಟ್ ಹೊಡಿಸ್ದೆ ಸರ್ವೋತ್ತಮನಿಗೆ ೪೦೦೦ ಮತ ಬಿದ್ದಿದ್ದು ನಮ್ಮ ಬ್ಯಾಡ್‌ಲಕ್ ಕಣ್ರಿ ಸೋಲಲ್ಲ.

ಸಿವಬಸಪ್ಪ : ನಾವೇ ಅಪ್ಪ ಮಗ ಕ್ಯಾಂಡಿಡೇಟು ಅಂತ ಹೇಳ್ಕೊಂಡು ಹಳ್ಳಿ ಹಳ್ಳಿ ಸುತ್ತಿದರೂ ಸೋತರು. ಕಾರಣ ಸೋತಿದ್ದು ನಾನಲ್ಲ ಸೋತಿದ್ದು ಅವರು ಅವರ ಒಣಜಂಭ.

ಗುರುಸಾಮಿ : ಇಲ್ಲಿ ಗೆದ್ದಿದ್ದು ಸಿದ್ದು ಅಲ್ರಿ. ಹಣ ಹೆಂಡ ಕ್ಯಾಸ್ಟು ದೇರ್‌ರ್ಪೋರ್ ನಾನು ಸೋತಿಲ್ಲ ಸಿದ್ದು ಗೆದ್ದಿಲ್ಲ. ಒಪ್ಕಂಡ್ರೆ ಒಪ್ಕಳಿ ಬಿಟ್ರೆ ಬಿಡಿ.

ಕರುಣಾಕರ : ಹಣಕ್ಕೆ ವಾಲ್ಯೂ ನೀಡಿ ನನ್ನಂಥ ಪ್ರಾಮಾಣಿಕನ ಠೇವಣಿ ಕಳೆದಿದ್ದಾರೆ. ಮತದಾರರ ಬಗ್ಗೆ ನಾನು ಮರುಕ ಪಡುತ್ತೇನೆ.

ಸರ್ವೋತ್ತಮ : ಉಳಿದವರಿಗೆ ಕಂಪೇರ್ ಮಾಡಿದ್ರೆ ನಾನೇ ಸರ್ವರೊಳಗುತ್ತಮನು. ಪೈಸೇನೂ ಬಿಚ್ದೆ ೪೧೮೩ ಮತ ಗಿಟ್ಟಸಿವ್ನಿ ಮತದಾರರನ್ನ ದಡ್ಡ ಅನ್ನೋ ದತ್ತನೇ ರಿಯಲ್ ದಡ್ಡ.

ಎಸ್ಕೆಜೈನ್ ಎಂಬ ಅಜ್ಞಾನಿ :  ಸಿದ್ರಾಮು ಸೋಲು ಗ್ಯಾರಂಟಿ ಅಂದಿದ್ದು ಸುಳ್ಳುಗಿದೆ ನಿಜ. ಆದ್ರೆ ಆವಯ್ಯ ಗೆಲ್ಲೋದಿಲ್ಲ ಅಂತ್ಲೂ ನಾನಂದಿಲ್ಲ ಅನ್ನೋದೂ ನಿಜ. ವೀರೇಂದ್ರ ಹೆಗ್ಗಡೆ ಆಣೆ.

ಪಿ.ಜಿ.ಆರ್. ಸಿಂಧ್ಯ : ಈ ಚುನಾವಣೇಲಿ ಸೋತ ಅಪ್ಪ ಮಕ್ಳು ಇನ್ನಾದರೂ ಪಾಠ ಕಲೀಲಿ ಪ್ಯೂರ್ ಆಡಳಿತ ನೀಡ್ಲಿ. ಐ ಡೋಂಟ್ ಬೆಂಡ್ ಮೈ ಹೆಡ್ ಇನ್ ಫ್ರಂಟ್ ಆಫ್ ಗೌಡ.

ಈ ಹೇಳಿಕೆ ಹೊರಬೀಳುತ್ಲು ದೊಡ್ಡ ಗೋಡ ಖಡ್ಗ ಎತ್ತಿದ್ದು ಸಿಂಧ್ಯಾನ ಮ್ಯಾಗೆಯಾ. ಸೋತ ಬಗ್ಗೆ ರಿ ಆಕ್ಶನ್ ನೀಡಿದಷ್ಟು ನಿತ್ರಾಣವಾದ ಗೌಡ ಆಸ್ಪತ್ರೆ ಸೇರಿ ಬೆಡ್‌ರೆಸ್ಟು ತಗೊಂಡಿದ್ದು ಬೆಂಗಳ್ಗೂರಿಗೆ ಕಾಲಿಡುತ್ಲೆ ಸಿಂಧ್ಯ ಸಸ್ಪೆಂಡ್ ಮಾಡಿದ್ದೇ ತಡ ಎಗರಿ ಬಿದ್ದಿದ್ದು ರೇಮಂಡ್ ಪೀಟರ್ ಮ್ಯಾಗೆ. ಚುನಾವಣೆನಾಗೆ ಅಕ್ರಮ ನಡೆದೈತೆ ಅಂತ ಡೆಲ್ಲಿಗೆ ಹಾರಿ ಹೈಕೋಲ್ಟಿಗೆ ರಿಟ್ ಅರ್ಜಿ ಹಾಕಿದ ಗೌಡ ಪೀಟರ್ ಮ್ಯಾಗೆ ಪ್ರೆಸಿಡೆಂಟಿಗೆ ಕಂಪ್ಲೇಂಟ್ ಸಲ್ಲಿಸ್ಯಾರ್ರಿ! ಹೆಂಗೈತೆ ನೋಡ್ರಲಾ ಗೋಡ್ರ ವರಸೆ – ಕೆಳಕಾ ಬಿದ್ದರೊ ನನ್ನ ಮೊಂಡ ಮೂಗು ಮ್ಯಾಲೆ ಅಂದರಂತೆ. ಜನತಾ ನ್ಯಾಯಾಲದ ತೀರ್ಪು ಅಖೈರು ಅಂತ ನಿಟ್ಟುಸಿರು ಬಿಡ್ತಾ ಚಾಮುಂಡಿ ಮತದಾರರಿಗೂ ಸಿದ್ರಾಮೂಗೂ ಒಳ್ಗೆ ಕಣ್ಣೀರಿಡ್ತಾ ಕಂಗ್ರಾಟ್ಸ್ ಹೇಳಿದ ಕೊಮಾಸಾಮಿನೂ ಈಗ ಪ್ಲೇಟ್ ಚೇಂಜ್ ಮಾಡವ್ನೆ. ಸೆಂಟ್ರಲ್‌ನಾಗೆ ವೀರೇಂದ್ರಕುಮಾರ ಸುರೇಂದ್ರ ಮೋಹನ್ ತಂಡ ಮುಂದಿನ ವಾರ್ದಾಗೆ ಗೋಡನ್ನೇ ಸಸ್ಪೆಂಡ್ ಮಾಡ್ತೀವಿ ಅಂತ ಸ್ಯಪಥ ಮಾಡವರೆ. ಇದೇನು ಆಶ್ಚರ್ಯ ಅಲ್ಲ ಬಿಡ್ರಿ. ಕೇಳ್ರಿಲ್ಲಿ ಜೆಡಿ‌ಎಸ್ ನಾಗಿದ್ದ ಸಿದ್ದು ಯಿಂದ ಸಿಂಧ್ಯಾವಗೂ ಸಸ್ಪೆಂಡ್ ಪಾರ್ಟೀಗುಳೇ ಹೆಚ್ಚು ಆದರೆ ಸಿದ್ದು ಏಳು ಜನ ಫಾಲೋಯರ್ಸು ಗೋಡ್ರಿಂದ ಸಸ್ಪಂಡ್ ಆಗವರೆ. ತಿಕ್ಕಲು ತಿರುಗಿದಾಗ ಅಥವಾ ನಾಟಕ ಆಡಿ ಮಂದಿ ನಂಬಿ ಸೋಕಾಗಿ ಕೊಮಾಸಾಮಿ ಸಹಿತ ೩೯ ಮಂದಿ ಸ್ಯಾಸಕನ ಗೋಡ್ರೆ ಸಸ್ಪಂಡ್ ಮಾಡಾಕಿದ್ದೂ ಆತು. ಒಟ್ಟಾರೆ ೫೮ ಮಂದ್ಯಾಗೆ ೪೮ ಮಂದಿ ಸಸ್ಪೆಂಡ್ ಗಿರಾಕಿಗಳೆ! ಈಗ ಆ ಲಿಸ್ಟ್‌ಗೆ ದೊಡ್ಡ ಗೋಡ್ರೂ ಸೇರಿದ್ರೆ ಅಲ್ಲಿಗೆ ಜೆಡಿ (ಸೆಕ್ಯೂಲರ್) ಅಲ್ಲ ಜೆಡಿ (ಸಸ್ಪೆನ್ಶನ್) ಹೌದಿಲ್ರೋ! ನೀವೇ ಹೇಳ್ರಲಾ. ಈಗ ಕಾಂಗ್ರೆಸ್ನೋರೂ ಚುನಾವಣೆದಾಗ ಅಕ್ರಮ ನಡೆದೈತೆ ಅಂತ ಅಯೋಗಕ್ಕೆ ದೂರ ಸಲ್ಲಿಸ್ತಾರಂತ್ರಿ! ಬೈ ಗಾಡ್ ಗ್ರೇಸ್ ಐ ಸರ್‌ವೈವ್ಡ್ ಅಂತ ನಿಟ್ಟುಸಿರು ಬಿಡ್ಲಿಕತ್ತಾನೆ ಸಿದ್ರಾಮು.

ಒಟ್ನಾಗೆ ಕೆಳವರ್ಗದೋರ ಮ್ಯಾಗೆ ಮೇಲು ವರ್ಗದ ಮಂದಿ ಒಟ್ಟಾಗಿ ಒಗ್ಗಟ್ಟಾಗಿ ಹಣ ಹೆಂಡದ ಹೊಳೆ ಹರಿಸಿದರೂ ಗೋತಾ ಹೊಡೆದದ್ದು ಸ್ವಲುಪ ಸಮಾದಾನ ತಂದೇತ್ರಿ. ಇಂಥ ಜಾತಿ ಕಿತ್ತಾಟ ಕೆಡುಕಿನ ಸೂಚ್ನೆ ಕಂಡ್ರಿ. ಮುಂದಿನ ಚುನಾವಣೆ ನಾಗಾದ್ರೂ ಜಾತಿ ಸಾಯಬೇಕು. ನೀತಿ ಬದುಕಬೇಕು. ನೀತಿವಂತರು ಗೆಲ್ಲಬೇಕು… ಏನಂತೀರಾ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಕ್ಕಡಿಗಳು
Next post ಹೀಗೂ ಆಯಿತೊಮ್ಮೆ

ಸಣ್ಣ ಕತೆ

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys